ನಡೆದ ಹಾದಿಯಗುಂಟ ಕಲ್ಲು ಮುಳ್ಳುಗಳದೇ ಕಾರುಬಾರು ಸುರಿಯುತಿಹ ರಕುತದ ಪರಿವೇ ಇಲ್ಲದೇ ಹಾಗೇ ನಡೆಯುತ್ತಿದ್ದಾನೆ, ನೋವಾಗಿ ಮುಖವ ಕಿವುಚಲಿಲ್ಲ ಹಸನ್ಮುಖಿಯಾಗಿ ಸುಮ್ಮನೇ ಚಲಿಸುತಿದ್ದಾನೆ, ಗಾಳಿ ಗಮಲಿನಂತೆ. ಎಲ್ಲೆಗಳನೆಲ್ಲಾ ಮೀರಿ ಎಲ್ಲಿಂದೆಲ್ಲಿಗೋ ಚಲಿಸುತಿದ್ದಾನೆ ನದಿಯಂತೆ, ಜಗದ ಕ್ರೂರತನದ ಕಾವಿಗೆ ಕರಗಿ ಹರಿಯುತಿದ್ದಾನೆ, ಬರೀ ಕತ್ತಲೆಯೇ ತುಂಬಿ ಜೀ ಗುಡುವಾಗ ಮೇಣವಾಗಿ ಬೆಳಕಿತ್ತು ಜಿನುಗುತಿದ್ದಾನೆ, ನಾನು ನಾನೆಂಬ ಅಹಂಗಳೇ ತಾಂಡವವಾಡುವಾಗ ಅವುಗಳ ಮುಖವಾಡ ಬಣ್ಣದ ಬಟ್ಟೆಗಳನೆಲ್ಲ್ಲಾಕಳಚಿ ನಗ್ನವಾಗಿಸಿದ್ದಾನೆ, ಕ್ರೌರ್ಯತನದ ಕಸವ ಗುಡಿಸೊ ಕೆಲಸದಲ್ಲಿ ಮಗ್ನನಾಗಿದ್ದಾನೆ, ಇನ್ನೂ ನಮ್ಮೊಳಗೆ ಸಣ್ಣಗಿನ ದೀಪದಂತಿದಾನೆ ಹುಡುಕಬೇಕಷ್ಟೇ ನಾವು ನಮ್ಮೊಳಗೆ ಆತನನ್ನು, ನಮ್ಮ ಮನಸಂತಿದ್ದಾನೆ
( ಕಾಲೇಜು ನನ್ನ ಜೀವನದಲ್ಲಿ ಹತ್ತಾರು ಬದಲಾವಣೆಗಳನ್ನ ಹಾಗು ಹೀಗೆ ಬದುಕಬೇಕೆಂಬ , ಪ್ರೀತಿ ಎಂದರೆ ಹೀಗೆ , ಸ್ನೇಹಿತರೆಂದರೆ ಹೀಗೆಂಬ ಪಾಠಗಳ ಹೇಳಿಕೊಟ್ಟು ಗುರು , ನನ್ನ ಮನಸಲ್ಲಿ ಪ್ರೀತಿ - ಪ್ರೇಮಗಳ ಪದಗಳ ಹುಡುಕಾಟ ನಡೆಸಿದ ನೆನಪುಗಳನ್ನು ಹಾಗೂ ಆ ನೆನಪುಗಳ ಬೀಜಗಳ ಬಿತ್ತಿದವರ ಪಾತ್ರ ಎಲ್ಲವನ್ನು ನಿಮ್ಮೆದುರಿಗಿಡುವ ಕಸರತ್ತು ಅಷ್ಟೆ ಹಾಗೂ ........ ) ಸ್ಕೂಲಿನಲ್ಲಿ ಮಕ್ಕಳು ಮಕ್ಕಳೆಂದೇ ನಮಗೆ ಮಕ್ಕಳ ಪಟ್ಟ ಕಟ್ಟಿದ್ದರು , ಕಾಲೇಜಿಗೆ ಸೇರಿಕೊಂಡು ದೊಡ್ಡವರಾಗಬೇಕೆಂದು ಪ್ರತಿಘ್ನೆ ಮಾಡಿದ್ದೆವು . ಕಾಲೇಜಿಗೆ ವಿಜ್ನಾನ ವಿಷಯದಲ್ಲಿ ಪ್ರವೇಶ ಪಡೆದಾದ ಮೇಲೆ ಕ್ಲಾಸಿಗೆ ಹೋಗುವ ಅ ಸುದಿನ ಬಂದಿತ್ತು . ಅಮ್ಮ ಯುದ್ಧಕ್ಕೆ ಹೊರಟುನಿಂತ ಸೈನಿಕನಿಗೆ ಆಶಿರ್ವದಿಸುವಂತೆ ಮುಖಕ್ಕೆ ಮಂಗಳಾರತಿ ಎತ್ತಿ ಹೊಸ ಪೆನ್ನನ್ನು ಜೇಬಿನಲ್ಲಿಟ್ಟು ಹೋಗಿಬಾ ಎಂದು , ಕಾಲೇಜಿನಲ್ಲಿ ಯಾರ ಜೊತೆಗೂ ಜಗಳವಾಡಬಾರದೆಂದು ಹೇಳಿ ಗೇಟಿನವರೆಗೂ ಬಂದು ಒಮ್ಮೆ ದೃಷ್ಟಿ ತೆಗೆದು ಹಾಕಿದರು , ಅಪ್ಪ ಐವತ್ತು ರೂಪಾಯಿ ಜೇಬಿನಲ್ಲಿ ತುರುಕಿ ಚೆನ್ನಗಿ ಓದು ಎಂದು ಹೇಳಿದರಾದರೂ ನನ್ನ ಓದಿನ ಸಲುವಾಗಿ ಅವರ ಮನಸಲ್ಲಿ ಕೊಂಚ ದುಗುಡವಿತ್ತು . ನಾನು ಹೊಸಬಟ್ಟೆಗಳ ತೊಟ್ಟು ಕೊಂಚ ಖುಷಿ ಕೊಂಚ ಭಯದಿಂದ ಹೊರಟು ನಿಂತೆ . ದಾರಿಯುದ್ದಕ್ಕೂ ಏನೇನೋ ಯೋಚನೆಗಳು...
Comments
Post a Comment
ಅನ್ಸಿದ್ ಬರೀರಿ