ಬಿಕ್ಷುಕ ಬಾಲೆ

ತ್ಯಾಪೆ ಹಚ್ಚಿದ ಬಟ್ಟೆ
ಮುಚ್ಚಿತ್ತು ದೇಹವ
ಸಾರಿ ಹೇಳುತಿತ್ತು ತನ್ನ
ಬಹು ವರ್ಷದ ಬದುಕ
ಯಾರೋ ದಾನವಾಗಿ ಕೊಟ್ಟದ್ದು
ಹಾಕಿ ಹಾಕಿ ಹರಿದಿತ್ತು.....!
ಬಹು ದಿನಗಳಿಂದ ಎಣ್ಣೆ-ನೀರು
ಕಾಣದ ಕೂದಲುಗಳು
ಒಣಗಿದ ಜಾಲಿಗಿಡದಂತೆ
ಗಾಳಿಗೆ ಓಲಾಡುತಿದ್ದವು
ಕನಸು ತುಂಬಿದ ಕಂಗಳಲಿ
ಜೀವನದ ಅರ್ಥವೇ
ಕರಗಿ ಹೋಗಿತ್ತು
ಹಾಗೆ......
ಮತ್ತೇನನ್ನೋ ಹುಡುಕುತಲಿತ್ತು..
ಹಾಡಲಾಸೆಯಿದ್ದರೂ ಮೌನಕೂಪಕ್ಕೆ
ತಳ್ಳಿ ಮನಸ್ಸು ದಳ್ಳುರಿಯಲ್ಲಿ
ಬೇಯುತಿತ್ತು.
ನೋವುಗಳೆಲ್ಲಾ ಹೊರಹಾಕ ಬೇಕಾದಲ್ಲಿ
ಒಂದಿಷ್ಟು ಜೋರಾಗಿ ಕೂಗಲೇ ಬೇಕಿತ್ತು
ಅವರಿವರು ಕೊಟ್ಟ ತಂಗಳಿನ ಬಾಳು
ನಡೆದಿತ್ತು ಹಲವು ತಿಂಗಳು
ಹೊಟ್ಟೆ ತುಂಬಿಸುವ ಕೆಲಸವಲ್ಲವದು.
ಸಾಯಲಿರುವ ಕನಸುಗಳಿಗೆ
ಜೀವ ಕೊಡುವಾಸೆ.
ಮಣ್ಣ ನೆಲವ ಕೆದರುತಲಿದ್ದ
ಕೈಗಳು ಜೀವನದ ತುಣುಕುಗಳನ್ನೇನೋ
ಹುಡುಕುತಲಿದ್ದವು
ಹುಡುಕುತಲೇ..... ಇದ್ದವು....
Comments
Post a Comment
ಅನ್ಸಿದ್ ಬರೀರಿ