ಕತ್ತಿಗಳಿಗೆ ಜೇಡ ತುಂಡರಿಸಲಾಗುತ್ತಿಲ್ಲ

ಇತಿಹಾಸವಾಗಬೇಕೆಂದು
ಸಾವಿರಾರು ಜನರಗಳ ಎದೆ ಬಗೆದು
ವೀರಗಲ್ಲು, ಮಾಸ್ತಿಗಲ್ಲು,
ಶಾಸನಗಳ ಕೆತ್ತಿಸಿದರು;
ಈಗ ಅವೆಲ್ಲಾ ಮಣ್ಣೊಳಗೆ ಹುದುಗಿ ಹೋಗಿವೆ;.

ರಕುತ ಕಾರಿ ಸತ್ತವರ
ಸೂತಕದ ಮನೆಗಳಿಗೆ
ಬೀಗ ಜಡಿದಾಗಿದೆ,
ಕೀಲಿ ಕೈ ಹೊಟ್ಟೆಯೊಳಗಿಟ್ಟುಕೊಂಡು
ಮಲಗಿಬಿಟ್ಟರು,
ಅಲ್ಲಿ ಮೌನದ ದೀರ್ಘ ಡೇಗು.

ಗೋಡೆಗೆ ನೇತುಬಿಟ್ಟಿದ್ದ
ಕತ್ತಿ-ಗುರಾಣಿಗಳು
ಮೊಂಡಾಗಿವೆ,
ಕಟ್ಟಿರುವ ಜೇಡವ ತುಂಡರಿಸಲಾಗುತಿಲ್ಲ;

ಗೋಡಗಳ ಸಂದಿಯಲ್ಲಿ
ಬೀಜಗಳು ಕಣ್ಣು ಬಿಡುತ್ತಿವೆ,
ಬಿರುಕು ಬಿಡಲು ಹೆಚ್ಚೇನು ಹೊತ್ತು ಬೇಕಾಗಿಲ್ಲ
ಬೆಳೆವ ಬೇರುಗಳಿಗೆ ಹಾವುಗಳ ಕಾಲು.

ಮಣ್ಣ ಪದರಗಳ ನಡುವೆ
ತೆರೆಚಿದ ಗಾಯಗಳು,
ಅಲ್ಲೇ ನರಳಾಟ.
ಮಕ್ಕಾಡೆ ಮಲಗಿದ್ದಾವೆ,
ಮೊಂಡಾಗಿವೆ ನೋಡು ರಾಜನ ಮುಖ
ಕೆತ್ತಿದ್ದ ಪದಗಳ ಜೊತೆ;
ಗೆದ್ದೆ ಎಂದು ಬೀಗಿದವರು! ಎದ್ದು ನಿಲ್ಲಲೂ
ಆಗುತ್ತಿಲ್ಲ...
-ಪ್ರವರ

Comments

Popular posts from this blog

ಫಸ್ಟ್ ಬೆಂಚ್ ಸುಂದ್ರಿ

ನದಿಯ ತಟದಲ್ಲೊಂದು ಬೋಳು ಮರ