ನನ್ನ ಪ್ರವರ

ಬರೆಯುವ ಗೀಳು ಹತ್ತಿದ್ದೇ ಹತ್ತಿದ್ದು ಮಿಕ್ಕ ಕೆಲಸಗಳನ್ನು ಸರಿಯಾಗಿ ಮಾಡುತ್ತಿಲ್ಲವೆಂಬುದು ಮನಸ್ಸಿನ ವ್ಯಥೆ... ಇದ್ದದ್ದನ್ನು ಇದ್ದಹಾಗೆ ಬರೆಯುತ್ತಿರು ಖುಷಿ ಇದೆ

Monday, April 29, 2013

ಬೆತ್ತಲು ದೇಹ, ಸಿಂಬೆ ಸುತ್ತಿದ ಹಾವು

ತೊಟ್ಟಿಕ್ಕುತಿದ್ದ ಹನಿಗಳು
ಶುಭ್ರವಾಗಿದ್ದವು,
ಚಿಗುರೆಲೆ ಸ್ವಲ್ಪವೂ ಅಲುಗಾಡಲೇ ಇಲ್ಲ
ಗಾಢ ಏಕಾಗ್ರತೆ

ನೀರ ಮೇಲ್ಮೈಗೆ ಅಂಟಿಕೊಂಡ
ದೋಣಿ ಮುಂದೆ ಚಲಿಸುತ್ತದೆ
ಹುಟ್ಟಿನ ಬಲವಿಲ್ಲದೇ,
ಕಾಲ ತಳ್ಳುತ್ತದೆ,
ಚಲಾವಣೆಗೆ ಬರುವವರೆಗೂ
ನಿಸ್ತೇಜ ದೇಹ,

ಒಣಗಿದ ಕೊಂಬೆಗಳಲ್ಲಿ
ಗೂಡುಗಳಿನ್ನೂ ಇವೆ,
ಕನಸುಗಳ ಅಂಟಿಸಿಕೊಂಡು
ಕಾಯುತ್ತಿವೆ.

ಪೊಟರೆಗೋ ಮೌನದ ಅಮಲು
ಒಳಗೊಳಗೆ ಗೂಬೆ ಕಣ್ಣು
ರಾತ್ರಿಗಷ್ಟೆ ನೋಟ,
ಚಂದ್ರನ ನೆರಳು; ಬೆಳ್ಳಗೆ ಬೆಳದಿಂಗಳು
ಹಗಲ ಸಾಲ ಪಡೆದಂತೆ,

ಹರಡಿಕೊಂಡು ಕುಳಿತಿರುವ
ಚುಕ್ಕೆಗಳ ಎಣಿಸಲು
ಸಂಖ್ಯೆಗಳಿಲ್ಲ,
ಗಾಳಿಯೊಳಗೆ ತೇಲಿಬಿಟ್ಟ ಏರುಸಿರು,
ಮೈಥುನವಾದ ಮೇಲೆ ಮೈ ತಣ್ಣಗೆ,
ಅಂಗಾತ ಬೆತ್ತಲು ದೇಹ,
ಸಿಂಬೆ ಸುತ್ತಿದ ಹಾವು.
-ಪ್ರವರ

No comments:

Post a Comment

ಅನ್ಸಿದ್ ಬರೀರಿ