ನನ್ನ ಪ್ರವರ

ಬರೆಯುವ ಗೀಳು ಹತ್ತಿದ್ದೇ ಹತ್ತಿದ್ದು ಮಿಕ್ಕ ಕೆಲಸಗಳನ್ನು ಸರಿಯಾಗಿ ಮಾಡುತ್ತಿಲ್ಲವೆಂಬುದು ಮನಸ್ಸಿನ ವ್ಯಥೆ... ಇದ್ದದ್ದನ್ನು ಇದ್ದಹಾಗೆ ಬರೆಯುತ್ತಿರು ಖುಷಿ ಇದೆ

Wednesday, February 6, 2013

ಮಣ್ಣಾಗಿ ಕಾಯುತ್ತೇನೆ


ಹೆಜ್ಜೆಗಳಿಟ್ಟೂ ಇಟ್ಟು
ದಾರಿಯಲ್ಲಿ ಹುಲ್ಲು ಬೆಳೆಯುತ್ತಿಲ್ಲ
ಹೆಜ್ಜೆಗಳ ಗುರುತೂ ಮೂಡಿಲ್ಲ
ಅಸ್ಪಷ್ಟ ಆಕಾರ.

ಖಾಲಿ ಆಕಾಶಕ್ಕೆ ಬೊಟ್ಟು
ಮಾಡಿ ನಿಂತ ಬೋಳು ಮರಕ್ಕೆ
ತನ್ನ ಬೇರುಗಳ ಆಳ ತಿಳಿಯುತ್ತಿಲ್ಲ
ಮಣ್ಣೊಳಗಿದ್ದ ಬಂಡೆ
ಎಡತಾಕುತ್ತಿದ್ದರೂ!
ಮೈ ಕೊಡವಿ ಕೂರುತ್ತಿಲ್ಲ
ತಣ್ಣಗೆ ಗಾಳಿ ಬೀಸಿದರೂ,

ಮೈತಾಕಿ ನನ್ನೆಡೆ
ತೆವಳುತ್ತಿದ್ದ ನಿನ್ನ ನೆನಪುಗಳು
ಬೇರುಗಳೋ ಬಿಳಲುಗಳೊ?
ನನ್ನೊಳಗಿಂದ ಇಳಿದರೂ ಇಳಿಯಲಿ
ಹೊರಕ್ಕೆಳೆಯಲಾಗದಷ್ಟು
ಆಳಕ್ಕೆ,
ಮಣ್ಣಾಗಿ ಕಾಯುತ್ತೇನೆ,

ನನ್ನೊಳ ಸತ್ವವನೆಲ್ಲವನ್ನು
ಹೀರಿ ಹೂವಾಗಿಸು
ಬೆರಳು ಹಿಡಿದು ಕೂತವರಿಗೊಂಷ್ಟು
ವಾಸನೆ ಬಡಿಯಲಿ,

ಆಗಸ ನೀನೆಂದುಕೊಂಡತೆ
ಯಾವಾಗಲೂ ಖಾಲಿಯಾಗೇ ಇರದು,
ಬಸುರುಗಟ್ಟುತ್ತದೆ,
ಒಂದಷ್ಟು ದಿನ ಕಾಯಬೇಕು

ನಾನು ಎದುರು ನೋಡುತ್ತಿದ್ದೇನೆ
ಸೋನೆ ಮಳೆಗೆ ನೀನು
ನನ್ನೊಳಗೆ ಇಳಿಯುತ್ತೀ ಎಂದು!
-ಪ್ರವರ


No comments:

Post a Comment

ಅನ್ಸಿದ್ ಬರೀರಿ