ರಾತ್ರಿ ಹನ್ನೊಂದಾಗಿತ್ತು, ಎಲ್ಲರೂ ಬಂದೂಕುಗಳ ಬಿಗಿದಪ್ಪಿ ಮಲಗಿದ್ದರು. ಒಬ್ಬರಿಗೆ ಜೋಗುಳ ಹಾಡುತಿದ್ದ ಅಮ್ಮನಂತಾದರೆ, ಕೆಲವೊಬ್ಬರಿಗೆ ದುಖಃದಲ್ಲಿ ಸಾಂತ್ವಾನ ಹೇಳಿ ಮುತ್ತಿಕ್ಕುತಿದ್ದ ಹೆಂಡತಿಯಂತೆ, ಇನ್ನೂ ಕೆಲವೊಬ್ಬರಿಗೆ ಅದೇ ಎಲ್ಲವೂ. ಭ್ರಷ್ಟ ಸಮಾಜವನ್ನು ಬಂದೂಕು ಹಿಡಿದು ಸರಿ ಮಾಡುತ್ತೇವೆಂದು, ದುಷ್ಟ ರಾಜಕಾರಣಿಗಳಿಂದ ಮಲ ಹತ್ತಿ ಮಲಿನವಾಗಿರುವ ಸಮಾಜವನ್ನು ತುಪಾಕಿ ಹಿಡಿದು ಶುಚಿ ಮಾಡುತ್ತೇವೆಂದು ಹೊರಟು ಬಂದವರಿಗೆ ನಕ್ಸಲರೆಂದು ಹಣೆಪಟ್ಟಿ ಕಟ್ಟಿ ಪೋಲಿಸರಿಂದ ಬೇಟೆಯಾಡುವುದಕ್ಕೆ ಬಿಟ್ಟಿದ್ದರು. ತಪ್ಪಿಸಿಕೊಂಡು ತಪ್ಪಿಸಿಕೊಂಡು ಆಗುಂಬೆಯ ದಟ್ಟಡವಿಯ ಬಂದು ಸೇರಿದ್ದ ಒಂದು ಗುಂಪು, ಈಗಾಗಲೇ ಪೋಲಿಸರ ಗುಂಡಿಗೆ ಸಹ ಸದಸ್ಯರಾದ ಸಿದ್ದು, ಚಿದಾನಂದ ಪ್ರಾಣ ತೆತ್ತಿದ್ದರು. ಉಳಿದಿದ್ದ ಏಳು ಜನರಲ್ಲಿ ಮಂಜುವನ್ನು ಹೊರತುಪಡಿಸಿ ಎಲ್ಲರೂ ಮಲಗಿದ್ದಾರೆ. ಹಾಗಂತ ಇವರೇನು ಓದದವರೇನಲ್ಲ, ನಾಲ್ಕು ಜನ ಕಲಾ ವಿಷಯದಲ್ಲಿ, ಉಳಿದ ಮೂವರು ವಿಜ್ನಾನ ವಿಷಯದಲ್ಲಿ ಪದವಿ ಪಡೆದವರು. ಸಮಾಜದ ತುಳಿತಕ್ಕೆ ಸಿಕ್ಕು ನೋವುಂಡವರು, ಕನಸಿನ ಪ್ರಪಂಚದ ನಿರ್ಮಾಣಕ್ಕಾಗಿ ತಮ್ಮದೇ ಹಾದಿ ಹಿಡಿದು, ಅಪ್ಪ ಅಮ್ಮ ಸೇಹಿತರೆಲ್ಲರನ್ನೂ ಬಿಟ್ಟು ಬಂದವರು. ಪ್ರಾಣ ಹಾರಿ ಹೋಗಬಹುದೆಂದು, ಅಂಗ ಊನರಾಗೀವೆಂದು ಭಯದಿಂದಲೂ ನಡುಗುತ್ತಲೂ ಮಲಗಿದ್ದರು. ಬೆಳಕಿಗೆಂದು ಹಚ...