Posts

ದತ್ತು ಪಡೆಯಿರಿ ನನ್ನ ಕೊಬ್ಬಿದ ಕನಸುಗಳ....

Image
ಕೈಗೆಟುಕದಿರುವ ಒಂದಿಷ್ಟು ಕನಸುಗಳಿವೆ ಯಾರಾದರು ದತ್ತು ತೆಗೆದುಕೊಳ್ಳಿ ನನ್ನಿಂದ ಎಲ್ಲವೂ ನನಸಾಗಲು ಹಾಂ! ಎಂದು ಒಪ್ಪಿರುವಾಗ ಇವಷ್ಟೇ, ನನ್ನ ಸತಾಯಿಸುತಿವೆ...... ನಾಲ್ಕೈದಿರಬಹುದು ಅಷ್ಟೆ, ಸ್ವಲ್ಪ ಪ್ರೀತಿ ತೋರಿದ್ದಕ್ಕೆ ಕೊಬ್ಬಿ ಕೊರಡಾಗಿವೆ, ಒದ್ದು ಬುದ್ದಿ ಕಲಿಸೋಣವೆಂದರೆ ಮನಸ್ಸೇ ಬರುತ್ತಿಲ್ಲ ಪ್ರೀತಿಯಿಂದ ಸಲುಹಿರುವೆನಲ್ಲವೆ......... ಸಾವಿರಾರು ಬಣ್ಣಗಳ ತುಂಬಿರುವೆ ಹಗಲಿರುಳೆನ್ನದೆ ಚಿತ್ತಾರವಾಗಿಸಿಹೆ ಕಪ್ಪು ಕನಸುಗಳಿಗೆ ಬಣ್ಣ ಕೊಡುವುದೆಂದರೆ ಸುಮ್ಮನೆಯೇ,..... ಸಾವಿರಾರು ಸುಂದರಿಯರು ಬೆವರು ಸುರಿಸಿದ್ದಾರೆ ನನ್ನ ಬಿಸಿಲ ಬಯಲ ನಾಡಿನ ಮುಗುದ ಜನಗಳ ಮುಗುಳು ನಗುವಿನ ಹಸನಾದ ಹರವಿದೆ, ಇವರೆಲ್ಲರ ಕರೆಸಿ ಹೇಳಿ ಮಾಡಿಸಿದ ಕಣ್ಣ ಕನಸುಗಳಿಂದು ನನಸಾಗುತ್ತಿಲ್ಲ..... ಸರಿ ದಾರಿ ತೋರಿಸಿ ನನ ಕನಸುಗಳ ಕೈ ಹಿಡಿಯಿರಿ...... ನಿಮ್ಮ ಕನಸುಗಳೆಂದು ಭಾವಿಸಿರಿ ನಿಮ್ಮ ಮನಸುಗಳೆಂದು ಪೋಷಿಸಿರಿ....

ನದಿಯ ತಟದಲ್ಲೊಂದು ಬೋಳು ಮರ

Image
ನದಿಯ ತಟದಲ್ಲೊಂದು ಬೋಳು ಬೋಳಾದ ಮರ ಅದರ ಬುಡದಲ್ಲೊಂದಿಷ್ಟು ಹಸಿರು ಹುಲ್ಲು ಬೋಳಾದ ಮರಕ್ಕೆ ಹತ್ತಾರು ಕಾಗೆ-ಗುಬ್ಬಿ ಗೂಡುಗಳು ನದಿಯ ದಂಡೆಯಲ್ಲಿದ್ದರೂ ನೀರುಣ್ಣದ ಮರ ಎಷ್ಟೇ ಗಾಳಿ ಬೀಸಿದರೂ ನಿಂತಿದೆ ಅಲ್ಲಾಡದೆ ಸುಮಾರು ವರುಷಗಳಾಯಿತು ಹಾಗೆ ನಿಂತು ಯಾರನ್ನೋ ಕಾಯುತ್ತಿರುವಂತಿದೆ ಹಸಿರುಡಲೊಲ್ಲದು, ಇರಬೇಕಂತೆ ಹೀಗೆ ವಿಧವೆಯಂತೆ ಯಾರದೋ ಮನೆಯ ಹಬ್ಬದಡುಗೆಗೆ ಉರಿ ಹಚ್ಚಿದ ಒಲೆಯ ಕಟ್ಟಿಗೆಯಾಗಬೇಕಂತೆ ಅದಕ್ಕೆ ಈ ತಪಸ್ಸು....

ನಾಚುತ್ತಿದೆ ನೂರು ದಾಟಿದ ಮುದುಕಿ

Image
ಕುಣಕಿ ಚೀಲದಲಿ ನಾಲ್ಕೈದು ಎಲೆ, ಪುಡಿಯಡಿಕೆ, ಚಿಕ್ಕ ದಬ್ಬಿಯಲ್ಲೋಸ್ಟು ನುಣ್ಣನೆಯ ಸುಣ್ಣ.... ಬೆಳ್ಳಿ ಕೂದಲ ಹೊದಿಕೆ ತಲೆಗೆ ನೂರಾರು ಹೊಲಿಗೆ ಹಾಕಿರುವ ಸೀರೆ ಮುಚ್ಚಲು ಸುಕ್ಕುಗಟ್ಟಿದ ಮೈಯ್ಯ... ಬಾಯಿ, ಇಲಿಯ ಬಿಲದಂತಿದೆ ಹುಡುಕಾಡಿದರು ಒಂದೇ ಒಂದು ಹಲ್ಲಿಲ್ಲ... ತನ್ನ ಗಂಡ ಪ್ರೀತಿಯಿಂದ ಕೊಟ್ಟಿದ್ದ ಬೆಳ್ಳಿ ಕೈಗಡಗಗಳು ಹಾಗೆಯೇ ಫಳಗುಡುತ್ತಿವೆ, ಸವೆಯಬಾರದೆಂದು ಕಬ್ಬಿಣದ ಪೆಟ್ಟಿಗೆಯಲ್ಲಿ ಭದ್ರವಾಗಿವೆ.... ಗಂಡನ ಹೆಸರ ಕೇಳಿದರೆ! ಇನ್ನು ನಾಚುತ್ತಿದೆ ನೂರು ದಾಟಿದ ಮುದುಕಿ, ಮೊನ್ನೆ ಹತ್ತು ತುಂಬಿದ ಮರಿ ಮೊಮ್ಮಗನ ಮದುವೆ ನೋಡಬೇಕಂತೆ.... ಅಬ್ಬಬ್ಬಾ ಬದುಕುವ ಪ್ರೀತಿಯೆಂದರೆ ಇದು, ಈಗಿನವರು ನಾವುಗಳು ಅರವತ್ತಕ್ಕೆ ಸುಸ್ತೋ ಸುಸ್ತು... (ಮನೆಯಲ್ಲಿ ಇದ್ದ ಮೂರು ಅಜ್ಜಿಗಳಲ್ಲಿ, ಒಬ್ಬಜ್ಜಿಯ ಬದುಕು ಹೀಗೆ)

ನನ್ನ ಜಿಲ್ಲೆಯ ಕತೆ

Image
ಹಚ್ಚ ಹಸಿರಿತ್ತು , ಬೆಟ್ಟಗಳ ಸಾಲಿತ್ತು ಅಲ್ಲಲ್ಲಿ ಹರಿದಿದ್ದ ಝಾರಿಯಿದ್ದವು ಕಲ್ಲೆದೆಯ ಮೇಲೆ ಹಸಿರುಟ್ಟ ಚಿಗುರಿದ್ದವು ಮಳೆ ಬಂದ ಮಾರನೆಯ ದಿನ ಮಣ್ಣಿನ ಘಮವಿತ್ತು , ಮರದ ಕೊಂಬೆಗಳ ಮೇಲೆ ಹಕ್ಕಿ ಗಳ ಗೂಡಿದ್ದವು ಅದರೊಳಗೆ ಹಕ್ಕಿ ಮರಿಯಿದ್ದವು , ಕಾಡೆಲ್ಲ ಅಲೆದಾಡಿ ಹುಲ್ಲ ಮೆಯುತಲಿದ್ದ ಜಿಂಕೆ ಗುಂಪಿ ದ್ದವು , ಪ್ರತಿಯ ಎಲೆ ಎಳೆಯಲ್ಲೂ ಬಾಳ ಕನಸಿದ್ದವು .... ಎಲ್ಲವೂ ಧೂಳಾಗಿವೆ , ಕೆಂಪು ಹುಡಿಯಾಗಿವೆ ಅದುರು ಅದುರೆಂಬ ಶಬ್ದಗಳೇ ತೆಲಾಡಿವೆ ... ಡೈನ ಮೇಟಿನ ಸ್ಪೋ ಟಕೆ ಚೂರು ಚೂರಾಗಿರುವ ಕಲ್ಲುಗಳಿವೆ , ರಾಕ್ಷಸಾಕಾರದ ಬುಲ್ದೊಜರು ಗಳಿವೆ , ಕೆಮ್ಮಣ್ಣು ಮೆತ್ತಿದ ಬಡ ಜನಗಳಿ ದ್ದಾರೆ ಬಟ್ಟ ಬಯಲಿದೆ , ಕೆಟ್ಟ ಬಿಸಿಲಿದೆ ಬಿಳಿಯ ಬಟ್ಟೆ ಯ ನು ಟ್ಟ ಗಣಿ ದಣಿ ಗ ಳಿ ದ್ದಾರೆ ಕಣ್ತೆರೆದು ನೋಡಲು ಏನು ಉ ಳಿದಿಲ್ಲ ನೋಡ ಹೋದರೆ ಬರಿ ಧೂಳು ಇದುವೇ ನನ್ನ ನಾಡಿನ ಗೋಳು

ಬಾಳು ಹೀಗೂ ಇದೆ

Image
ತಿಂಗಳ ಹಸುಗೂಸು ಕಂಕುಳಲ್ಲೇ ಇದೆ ಅಳುತ್ತಲಿದೆ ಹರಿದ ಹಳೆಯ ಸೀರೆಯಲ್ಲಿ ಮಗುವ ಕಟ್ಟಿಕೊಂಡಿದ್ದಾಳೆ, ಹಸಿವಾಗಿರಬೇಕು, ಜಲ್ಲಿ ಕಲ್ಲುಗಳ ಹೋರುತಿದ್ದಾಳೆ ಅದರಮ್ಮ.... ಅಪ್ಪ ಎಲ್ಲೋ ಕುಡಿದುಕೊಂಡು ಮೋರೆಯಲ್ಲೆಲ್ಲೋ ಬಿದ್ದಿರಬೇಕು ಮಗುವಿನ ಅಳು ಅವನಿಗೆ ಕೇಳುತಿಲ್ಲ... ಹೆತ್ತವಳಿಗೆ ಕೇಳುತ್ತಿದೆ ಆದರೆ ಮೊಲೆಯಲ್ಲಿ ತೊಟ್ಟು ಹಾಲಿಲ್ಲ.... ಬಿಸಿಲಲ್ಲಿ ಭಾರದ ಪುಟ್ಟಿ ಹೊತ್ತು ಹೊತ್ತು ಬತ್ತಿಹೋಗಿದೆ... ಹಾಗೆಯೆ ಬಾಳಬೇಕೆಂಬ ಕನಸುಗಳು ಬತ್ತಿ ಹೋಗಿವೆ ಮಗು ಇನ್ನೂ ಅಳುತ್ತಲೇ ಇದೆ ಸುಮ್ಮನಿರಿಸಲು ಇನ್ನೇನು ಮಾಡಿಯಾಳು.... ಅದರ ಹಸಿವಿನ ಅಳು ಕೇಳದಿರಲೆಂದು ಬಾಯ ಗಟ್ಟಿಗಾಗಿ ಮುಚ್ಚಿದ್ದಾಳೆ..... ಅವಳಂತೆ ಪೂರ್ತಿಯಾಗಿ ಅಳು ನಿಲ್ಲಿಸಿತ್ತು ನಿಟ್ಟುಸಿರ ಬಿಡುತ್ತಾ ಮಗುವ ನೋಡಲು ಉಸಿರೇ ನಿಲ್ಲಿಸಿತ್ತು.... ಅಲ್ಲಿಗೆ ಅದರ ಹೊಟ್ಟೆ ತುಂಬಿಸಲಾರದಿದ್ದರೂ ಹೆತ್ತ ತಪ್ಪಿಗೆ ಅಳುವ ಸರದಿ ಅವಳದ್ದಾಗಿತ್ತು....

"ನಾನು ಕಟ್ಟಿದ ಕವಿತೆ"

Image
ಅಂಗಿ ಜೇಬಿನಲಿ ಮೆತ್ತಗಾಗಿ ಹರಿದ ಹತ್ತರ ನೋಟಿನಂತೆ ಕೂತಲ್ಲೇ ಕೂತಿದೆ, ಮನೆಯ ಕೋಣೆಯಿ ಮೂಲೆಯಲಿ ಕಡ್ಡಿ ಕಿತ್ತಿದ್ದರೂ ಕಸ ಗುಡಿಸುತ್ತಿರುವ ಪೊರಕೆಯಂತೆ ನನ್ನ ಕವಿತೆ ಮರದ ಕೊಂಬೆಯಲಿ ಸಾಕು ಸಾಕಾಗಿ ಕೂತು ಉದುರಿದ ಓಣಗಿದೆಲೆಯಂತಿದೆ, ನಮ್ಮ ಮನೆಯ ಮುಂದೆ ಐದಾರು ದಶಕಗಳಿಂದ ಬೀದಿ ದೀಪ ಹೊತ್ತು ನಿಂತಿದ್ದ ತುಕ್ಕಿಡಿದ ಕಂಬದಂತಿದೆ ನನ್ನ ಕವಿತೆ. ’ ನಮ್ಮೂರ ಬಜಾರದಲ್ಲಿ ಮೂಟೆ ಹೋರುತಿದ್ದ ಹಮಾಲಿ ದುರುಗಪ್ಪನ ಹರಿದರೂ ಮೈ ಮುಚ್ಚುತಿಹ ಅಂಗಿಯಂತಿದೆ, ಎದುರು ಮನೆಯಜ್ಜನ ಕಾಲಲ್ಲಿ ಸವೆದು ಹರಿದರೂ ಹೊಳಪು ಕಳೆಕೊಳ್ಳದ ಚರ್ಮದ ಚಪ್ಪಲಿಯಂತಿದೆ ನನ್ನ ಕವಿತೆ ನಾನು ಕಟ್ಟಿದ ಕವಿತೆ ನನ್ನ ಜನರಂತೆ ಕಪ್ಪಗಿರಬಹುದು, ಮೃದು ಮನಸ ಸವಿತೆ.....

ಅವಳಿಲ್ಲದಿದ್ದರೂ

Image
(ಸಂಜೆ ಹೊತ್ತು ಹೊರಗಡೆ ಬೇಜಾರಿನಿಂದ ಕೂತಿದ್ದೆ, ನೋಡು ನೋಡುತಿದ್ದಂತೆ ಮಳೆರಾಯ ಆಗಮಿಸಿದ... ಮೈಯೆಲ್ಲ ನೀರು ಚಳಿಯಗುತಿತ್ತು ಆಗ ನನಗನ್ನಿಸಿದ್ದು) ಮತ್ತೆ ಮತ್ತೆ ನೆನೆಯುವಾಸೆ ಸುರಿಯೊ ತುಂತುರು ಮಳೆಯಲಿ ಅವಳ ನೆನಪಲಿ ಮಿಂದು ಬಂದ ಮನಸು ಕೊಂಚ ನೆನೆಯಲಿ ಹನಿ ಹನಿಗಳಲ್ಲೂ ಅವಳ ಮಾತು ಕೇಳುತಿಹವು ಕಿವಿಗಳು ಗೆಜ್ಜೆ ಸದ್ದನು ಬೀರುತಿಹವು ಎಲೆಯ ಮೇಲೆ ಬಿದ್ದ ಹನಿಗಳು ನನ್ನ ದೇಹವು ತೋಯುತಿರಲು ಅವಳ ಅಪ್ಪುಗೆ ಬಯಸಿದೆ ಕೆನ್ನೆ ಮೇಲಿಹ ತಂಪು ಹನಿಗಳು ಅವಳು ಇತ್ತ ಮುತ್ತಿನಂತಿದೆ ಅವಳಿಲ್ಲ ಜೊತೆಯಲ್ಲಿ ಆದರೂ ಜೊತೆ ಇರುವಂತಿದೆ ಸುತ್ತಲೂ ಘಾಡ ಮೌನವಿದ್ದರೂ ಅವಳು ಮಾತನಾಡಿದಂತಿದೆ