ಆಟೋಗ್ರಾಫ಼್

(ಹಳೆಯ ಪುಸ್ತಕಗಳ ಕೆದಕಿ ಏನೋ ಹುಡುಕುತಿದ್ದ ವೇಳೆ ಆಟೋಗ್ರಾಫ಼್ ಪುಸ್ತಕ ಸಿಕ್ಕು, ಸ್ವಲ್ಪ ಪುಟಗಳ ತಿರುವಿ ಹಾಕಿದಾಗ ನೆನಪುಗಳು ಸಾಲಾಗಿ ನಿಂತು ಹಲೋ"" ಎನ್ನುತಿದ್ದವು, ನಾ ಮುಂದೆ ತಾ ಮುಂದೆ ಎಂದು ಕಣ್ಣ ಚಿತ್ರಪಟಲದಲ್ಲಿ ಚಿತ್ತಾರ ಮೂಡಿಸಿದವು, ಬರೆಯುವ ಮನಸಿಲ್ಲದಿದ್ದರೂ ಬರೆಯುವಂತೆ ಮಾಡಿದವು ಅದರ ಪ್ರತಿಫಲವೇ.....!!!! ) ಎಲ್ಲಾ ಅಕ್ಷರಗಳೆಲ್ಲಾ ನನ್ನೇ ಕೆಕ್ಕರಿಸಿಕೊಂಡು ನೋಡುತ್ತಿವೆಯಲ್ಲಾ!!!! ಬಣ್ಣ ಬಣ್ಣದ ಪೆನ್ನಿಂದ ಬರೆದು ಗೀಚಿದ ಪುಟಗಳೆಲ್ಲಾ ಲಕ ಲಕನೆ ಹೊಳೆಯುತ್ತಿವೆ, ಎಲ್ಲೋ ಕೇಳಿದ ದ್ವನಿಗಳು ಕಿವಿಯಲ್ಲಿ ಪಿಸುಗುಟ್ಟಿದಂತಿದೆ ಮೆಲ್ಲನೆ, ಕಣ್ಣು ಪಿಳುಕಿಸಲಾಗುತ್ತಿಲ್ಲ ಅದರೊಳಗೆ ಮುದ್ದಾದ ನಗು ಮೊಗಗಳ ಚಿತ್ತಾರ ಮೂಡುತ್ತಿವೆ. ಬೆನ್ನ ಹಿಂದೆ ಯಾರೋ ನಿಂತು ಜೋರಾಗಿ ನನ್ನೆಸರ ಕೂಗಿದಂತಿತ್ತು ನೆನಪ ಮಳೆಗೆ ನೆನೆದ ಕಣ್ಣು ಒದ್ದೆಯಾಗಿ ಕೆನ್ನೆವರೆಗು ಜಾರಿತ್ತು. ಕಳೆದ ದಿನಗಳ ಕರೆದು ತೋರಿಸಿ ಮರೆತ ಮುಖಗಳ ಮತ್ತೆ ಮಾತಾಡಿಸಿದ ಪುಸ್ತಕಕೆ ನನ್ನದೊಂದು ಸಲಾಮು......