"ನಾನು ಕಟ್ಟಿದ ಕವಿತೆ"

ಅಂಗಿ ಜೇಬಿನಲಿ ಮೆತ್ತಗಾಗಿ ಹರಿದ ಹತ್ತರ ನೋಟಿನಂತೆ ಕೂತಲ್ಲೇ ಕೂತಿದೆ, ಮನೆಯ ಕೋಣೆಯಿ ಮೂಲೆಯಲಿ ಕಡ್ಡಿ ಕಿತ್ತಿದ್ದರೂ ಕಸ ಗುಡಿಸುತ್ತಿರುವ ಪೊರಕೆಯಂತೆ ನನ್ನ ಕವಿತೆ ಮರದ ಕೊಂಬೆಯಲಿ ಸಾಕು ಸಾಕಾಗಿ ಕೂತು ಉದುರಿದ ಓಣಗಿದೆಲೆಯಂತಿದೆ, ನಮ್ಮ ಮನೆಯ ಮುಂದೆ ಐದಾರು ದಶಕಗಳಿಂದ ಬೀದಿ ದೀಪ ಹೊತ್ತು ನಿಂತಿದ್ದ ತುಕ್ಕಿಡಿದ ಕಂಬದಂತಿದೆ ನನ್ನ ಕವಿತೆ. ’ ನಮ್ಮೂರ ಬಜಾರದಲ್ಲಿ ಮೂಟೆ ಹೋರುತಿದ್ದ ಹಮಾಲಿ ದುರುಗಪ್ಪನ ಹರಿದರೂ ಮೈ ಮುಚ್ಚುತಿಹ ಅಂಗಿಯಂತಿದೆ, ಎದುರು ಮನೆಯಜ್ಜನ ಕಾಲಲ್ಲಿ ಸವೆದು ಹರಿದರೂ ಹೊಳಪು ಕಳೆಕೊಳ್ಳದ ಚರ್ಮದ ಚಪ್ಪಲಿಯಂತಿದೆ ನನ್ನ ಕವಿತೆ ನಾನು ಕಟ್ಟಿದ ಕವಿತೆ ನನ್ನ ಜನರಂತೆ ಕಪ್ಪಗಿರಬಹುದು, ಮೃದು ಮನಸ ಸವಿತೆ.....